ಜನಮೇಜಯ	-
ಮಹಾಭಾರತದಲ್ಲಿ ಈ ಹೆಸರಿನ ಐವರು ರಾಜರುಗಳು ಬರುತ್ತಾರೆ. ಇವರಲ್ಲಿ ಮೂವರು ಚಂದ್ರವಂಶಕ್ಕೆ ಸೇರಿದವರು. ಉಳಿದಿಬ್ಬರಲ್ಲಿ ಒಬ್ಬ ಸೂರ್ಯವಂಶಕ್ಕೆ ಮತ್ತೊಬ್ಬ ಪರ್ವತವಂಶಕ್ಕೂ ಸೇರುತ್ತಾರೆ. ಸೂರ್ಯ ವಂಶದ ದಿಷ್ಟರಾಜ ಕುಲದಲ್ಲಿ ಬರುವ ಜನಮೇಜಯ ಸುಮತಿ ರಾಜನ ಪುತ್ರ. ಈತ ಮೂರು ದಿನಗಳಲ್ಲೆ ಜಗತ್ತನ್ನೆಲ್ಲ ಗೆದ್ದು ಅಜೇಯನೆನಿಸಕೊಂಡ ಅಸಾಮಾನ್ಯ ಚಕ್ರವರ್ತಿ. ಪರ್ವತ ವಂಶಕ್ಕೆ ಸೇರಿದ ಜನಮೇಜಯ ಕುರುಕ್ಷೇತ್ರದ ಯುದ್ಧದಲ್ಲಿ ಪಾಂಡವರ ಪರವಾಗಿ ಹೋರಾಡಿ ದುರ್ಯೋಧನನ ತಮ್ಮನಾದ ದುರ್ಮುಖನಿಂದ ಹತನಾಗುತ್ತಾನೆ. ಉಳಿದ ಮೂವರು ಚಂದ್ರವಂಶದ ಅರಸುಗಳಲ್ಲಿ ದುಷ್ಯಂತನ ಮಗನಾದ ಜನಮೇಜಯನೊಬ್ಬ. ಈತನ ತಾಯಿ ಲಾಕ್ಷಿ. ಇನ್ನೊಬ್ಬ ಪೂರುರಾಜನಿಗೂ ಕೌಸಲ್ಯೆಗೂ ಜನಿಸಿದವ. ಈತ ಮಗಧ ರಾಜ್ಯದ ರಾಜಪುತ್ರಿ ಸುನಂದೆಯ ಗಂಡ. ಪ್ರಾಚೀನ್ವಂತನ ತಂದೆ. ಈತ ಗಾಗ್ರ್ಯನ ಮಗನನ್ನು ಹಿಂಸಿಸಿ ಬ್ರಹ್ಮಹತ್ಯೆಯ ಪಾಪಕ್ಕೆ ಗುರಿಯಾದ. ಅದರ ಪರಿಹಾರಕ್ಕಾಗಿ ಇಂದ್ರೊತಮ ಮುನಿಯಿಂದ ಅಶ್ವಮೇಧಯಾಗವನ್ನು ಮಾಡಿಸಿದ.

	ಜನಮೇಜಯ ಎಂಬ ಹೆಸರುಳ್ಳ ರಾಜರುಗಳಲ್ಲೆಲ್ಲ ಅತ್ಯಂತ ಖ್ಯಾತಿಯನ್ನೂ ಮಹತ್ತ್ವವನ್ನೂ ಪಡೆದವನೆಂದರೆ ಚಂದ್ರವಂಶದ ಪರೀಕ್ಷಿದ್ರಾಜನ ಮಗ. ಅಭಿಮನ್ಯುವಿನ ಮೊಮ್ಮಗ ; ಅರ್ಜುನನ ಮರಿಮಗ. ಶ್ರುತಸೇನ, ಉಗ್ರಸೇನ ಮತ್ತು ಭೀಮಸೇನ ಎಂಬುವರು ಈತನ ಸೋದರರು. ಈ ಜನಮೇಜಯನ ತಾಯಿ ಪರೀಕ್ಷಿದ್ರಾಜನ ಪಟ್ಟದ ರಾಣಿ ಭದ್ರಾವತಿ. ತಾನು ಕೈಗೊಂಡ ಅನೇಕ ಕಾರ್ಯಗಳ ನಿಮಿತ್ತ ಈತ ತುಂಬ ಗಮನಾರ್ಹನಾದವ ; ಮಹಾಭಾರತ ಕಥಾವಸ್ತುಗಳಲ್ಲಿ ಒಂದಲ್ಲೊಂದು ರೀತಿಯಲ್ಲಿ ಉಲ್ಲೇಖಗೊಂಡವ. ವೈಶಂಪಾಯನ ಮಹರ್ಷಿಯಿಂದ ಈತ ಭಾರತ ಕಥೆಯನ್ನು ಕೇಳಿದ್ದು ಇದಕ್ಕೆ ಮುಖ್ಯ ಕಾರಣಗಳಲ್ಲೊಂದು.

	ಈತ ಪರೀಕ್ಷಿತ್ ರಾಜನ ತರುವಾಯ ಪಟ್ಟಕ್ಕೆ ಬಂದು, ಕಾಶಿ ರಾಜನಾದ ಸುವರ್ಮನ ಮಗಳಾದ ವಪುಷ್ಟಮೆಯನ್ನು ಮದುವೆಯಾಗುತ್ತಾನೆ. ಇವರಿಗೆ ಶತಾನೀಕ, ಶಂಕುಕರ್ಣರೆಂಬ ಇಬ್ಬರು ಪುತ್ರರಾಗುತ್ತಾರೆ. ವೈಶಂಪಾಯ ಮಹರ್ಷಿಯ ಮೂಲಕ ಈತ ಸಮಗ್ರ ಭಾರತ ಕಥೆಯನ್ನು ಕೇಳುತ್ತಾನೆ. ತನ್ನ ತಾತಂದಿರಾದ ಪಾಂಡವರ ಪರಾಕ್ರಮವನ್ನು ಕೇಳಿ ಹಿಗ್ಗುತ್ತಾನೆ. ಆದರೆ ತನ್ನ ತಂದೆಯಾದ ಪರೀಕ್ಷಿತರಾಜ ತಕ್ಷಕ ಎಂಬ ಸರ್ಪ ಕಡಿದು ಸತ್ತುದನ್ನು ಕೇಳಿ, ವ್ಯಥೆಗೊಂಡು ಮಹಾರೋಷಾವಿಷ್ಟನಾಗಿ ಸರ್ಪವಂಶವನ್ನೇ ನಿರ್ಮೂಲ ಮಾಡುವ ಪಣತೊಟ್ಟು ಸರ್ಪಯಜ್ಞಮಾಡಲು ಆರಂಭಿಸುತ್ತಾನೆ. ಶ್ರುತಶ್ರವಸನೆಂಬ ಋಷಿಯ ಮಗನಾದ ಸೋಮಶ್ರವನೆಂಬಾತ ಪುರೋಹಿತನಾಗುತ್ತಾನೆ. ಯಾಗ ಪ್ರಾರಂಭವಾಗುವಾಗ ಸಾರಮೇಯ ಎಂಬ ಒಂದು ನಾಯಿ ಆ ಸ್ಥಳಕ್ಕೆ ಬರುತ್ತದೆ. ಅದನ್ನು ಜನಮೇಜಯನ ಸೋದರನಾದ ಶ್ರತಸೇನ, ಉಗ್ರಸೇನ ಮತ್ತು ಭೀಮಸೇನರು ಹೊಡೆದೋಡಿಸುತ್ತಾರೆ. ಆ ನಾಯಿ ತನ್ನ ತಾಯಿಯಾದ ಸರಮೆಯಲ್ಲಿ ತನ್ನ ಸಂಕಟವನ್ನು ಹೇಳಿಕೊಳ್ಳುತ್ತದೆ. ತಾಯಿ ಕೂಡಲೆ ಯಜ್ಞ ನಡೆಯುವಲ್ಲಿಗೆ ಬಂದು ತನ್ನ ಮಗನನ್ನು ಹೊಡೆದದ್ದು ಜನಮೇಜಯನ ಸಂಪತ್ತು ಹಾಳಾಗುವುದಕ್ಕೆ ದುಶ್ಯಕುನ ಎಂಬುದಾಗಿ ಹೇಳುತ್ತದೆ. ಅಪಶಕುನದ ನಿವಾರಣೆಗಾಗಿ ರಾಜ ಶಾಂತಿಕರ್ಮ ಮಾಡಿಸುತ್ತಾನೆ. ಜನಮೇಜಯ ಕೈಗೊಂಡ ಭೀಕರವಾದ ಸರ್ಪಯಾಗದಲ್ಲಿ ಚಂಡಭಾರ್ಗವನೆಂಬ ಮುನಿ ಋಗ್ವೇದ ಮಂತ್ರಗಳನ್ನು ಹೇಳುವ ಅಧ್ವರ್ಯುವಾಗಿಯೂ ಜೈಮಿನಿ ಮಹರ್ಷಿ ಸಾಮಮಂತ್ರಗಳನ್ನು ಹೇಳುವ ಉದ್ಗಾತೃವಾಗಿಯೂ ಅಂಗೀರಸಮುನಿ ಬ್ರಹ್ಮನಾಗಿಯೂ ಇದ್ದು ಬಹು ಪ್ರಮುಖವಾದ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಅಸಿತ, ದೇವಲ, ವ್ಯಾಸ, ಉದ್ದಾಲಕ, ಶ್ವೇತಕೇತು, ಪರ್ವತ, ನಾರದ, ಕಹೋಳ ಮುಂತಾದವರು ಸದಸ್ಯರಾಗಿ ಯಜ್ಞದಲ್ಲಿ ಪಾಲ್ಗೊಳ್ಳುತ್ತಾರೆ. ಸರ್ಪ ಯಜ್ಞ ಪ್ರಾರಂಭವಾಗಿ ಋತ್ವಿಜರು ಹೋಮ ಮಾಡುವಾಗ ಸರ್ಪಗಳು ಒಂದಾದ ಮೇಲೊಂದು ಬಂದು ಅಗ್ನಿಕುಂಡದಲ್ಲಿ ಬಿದ್ದು ಬೆಂದುಹೋಗುತ್ತವೆ. ಉಳಿದ ಸರ್ಪಗಳು ಭಯಗೊಂಡು ಕಾಪಾಡುವಂತೆ ಜರತ್ಕಾರುವನ್ನು ಪ್ರಾರ್ಥಿಸಲಾಗಿ ಏಕೆ ತನ್ನ ಮಗನಾದ ಆಸ್ತೀಕನನ್ನು ಜನಮೇಜಯನಲ್ಲಿಗೆ ಕಳುಹಿಸುತ್ತಾಳೆ. ಆಸ್ತೀಕ ಜನಮೇಜಯನಿಗೆ ಪ್ರಾಣಿಹಿಂಸೆ ತಕ್ಕುದಲ್ಲವೆಂದು ಬೋಧಿಸಿ, ಸರ್ಪಯಾಗವನ್ನು ನಿಲ್ಲಿಸುತ್ತಾನೆ.

	ಪಾಂಡವ ಪರಂಪರೆಯನ್ನು ಮುಂದುವರಿಸಿದ ಜನಮೇಜಯನ ಪಿತೃಭಕ್ತಿಯೂ ಛಲವೂ ಈ ಪ್ರಸಂಗಳಲ್ಲಿ ಎದ್ದು ಕಾಣುತ್ತವೆ. 											(ಎಂ.ಸಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ